1 Samuel 11

ಸೌಲನು ಅಮ್ಮೋನಿಯರನ್ನು ಸೋಲಿಸಿದ್ದು

1ಅಮ್ಮೋನಿಯನಾದ ನಾಹಾಷನು ಹೊರಟು ಬಂದು ಯಾಬೇಷ್ ಗಿಲ್ಯಾದಿಗೆ ಮುತ್ತಿಗೆ ಹಾಕಲು, ಯಾಬೇಷಿನವರು ಅವನನ್ನು, <<ನೀನು ನಮ್ಮ ಸಂಗಡ ಒಡಂಬಡಿಕೆ ಮಾಡಿಕೋ; ನಾವು ನಿನ್ನನ್ನು ಸೇವಿಸುವೆವು>> ಎಂದು ಬೇಡಿಕೊಂಡರು. 2ಅದಕ್ಕೆ ಅವನು, <<ಎಲ್ಲಾ ಇಸ್ರಾಯೇಲರನ್ನು ಅವಮಾನಪಡಿಸುವುದಕ್ಕಾಗಿ ನಾನು ಮೊದಲು ನಿಮ್ಮಲ್ಲಿ ಪ್ರತಿಯೊಬ್ಬರ ಬಲಗಣ್ಣನ್ನು ಕಿತ್ತುಹಾಕುತ್ತೇನೆ. ಇದಕ್ಕೆ ನೀವು ಒಪ್ಪುವುದಾದರೆ ನಿಮ್ಮ ಸಂಗಡ ಒಡಂಬಡಿಕೆ ಮಾಡಿಕೊಳ್ಳುತ್ತೇನೆ>> ಎಂದು ಉತ್ತರಕೊಟ್ಟನು.

3ಆಗ ಯಾಬೇಷಿನ ಹಿರಿಯರು ಅವನಿಗೆ, <<ಏಳು ದಿನಗಳವರೆಗೆ ಸಮಯ ಕೊಡು; ಅಷ್ಟರೊಳಗೆ ನಾವು ಇಸ್ರಾಯೇಲರ ಎಲ್ಲಾ ಪ್ರಾಂತ್ಯಗಳಿಗೆ ದೂತರನ್ನು ಕಳುಹಿಸುತ್ತೇವೆ. ನಮ್ಮನ್ನು ಯಾರೂ ರಕ್ಷಿಸದಿದ್ದರೆ, ನಾವು ನಿನ್ನ ಬಳಿಗೆ ಹೊರಟು ಬಂದು ನಿನಗೆ ಅಧೀನರಾಗುತ್ತೇವೆ>> ಎಂದು ತಿಳಿಸಿದರು.

4ದೂತರು ಸೌಲನು ವಾಸವಾಗಿದ್ದ ಗಿಬೆಯಕ್ಕೆ ಬಂದು ಅಲ್ಲಿನವರಿಗೆ ವರ್ತಮಾನವನ್ನು ತಿಳಿಸಲು ಎಲ್ಲರೂ ಅಳತೊಡಗಿದರು. 5ಆಷ್ಟರಲ್ಲಿ ಸೌಲನು ಹೊಲದಿಂದ ದನಗಳನ್ನು ಹೊಡೆದುಕೊಂಡು ಬಂದನು. ಅವನು, <<ಜನರು ಗೋಳಾಡುವುದಕ್ಕೆ ಕಾರಣವೇನು?>> ಎಂದು ಕೇಳಲು ಅವರು ಅವನಿಗೆ ಯಾಬೇಷಿನವರ ವರ್ತಮಾನವನ್ನು ತಿಳಿಸಿದರು.

6ಆಗ ಯೆಹೋವನ ಆತ್ಮವು ಅವನ ಮೇಲೆ ಬಂದಿತು. ಅವನು ಬಹಳ ಕೋಪಗೊಂಡು,
11:6 ನ್ಯಾಯ. 19:29.
ಒಂದು ಜೋಡಿ ಎತ್ತುಗಳನ್ನು ತೆಗೆದುಕೊಂಡು ತುಂಡು ತುಂಡು ಮಾಡಿದನು.
7ಆ ತುಂಡುಗಳನ್ನು ದೂತರ ಮುಖಾಂತರ ಇಸ್ರಾಯೇಲರ ಎಲ್ಲಾ ಪ್ರಾಂತ್ಯಗಳಿಗೆ ಕಳುಹಿಸಿ, <<ಯಾರು ಸೌಲ, ಸಮುವೇಲರನ್ನು ಹಿಂಬಾಲಿಸುವುದಿಲ್ಲವೋ ಅವರ ಎತ್ತುಗಳು ಹೀಗೆಯೇ ಕಡಿಯಲ್ಪಡುವವು>> ಎಂದು ಹೇಳಿ ಕಳುಹಿಸಿದನು. ಯೆಹೋವನಿಗೆ ಭಯಪಟ್ಟು ಜನರೆಲ್ಲರೂ ಏಕಮನಸ್ಸಿನಿಂದ ಬೆಜೆಕಿನಲ್ಲಿ ಕೂಡಿಬಂದರು. 8ಅವರನ್ನು ಬೆಜೆಕಿನಲ್ಲಿ ಕ್ರಮಪಡಿಸಿ ಲೆಕ್ಕಿಸಿದಾಗ ಇಸ್ರಾಯೇಲರಲ್ಲಿ ಮೂರು ಲಕ್ಷ ಸೈನಿಕರೂ ಯೆಹೂದ್ಯರಲ್ಲಿ ಮೂವತ್ತು ಸಾವಿರ ಸೈನಿಕರೂ ಇದ್ದರು.

9ಅವರು ಬಂದಿದ್ದ ದೂತರಿಗೆ, <<ನಾಳೆ ಮಧ್ಯಾಹ್ನದಲ್ಲಿ ನಿಮಗೆ ಸಹಾಯ ಸಿಕ್ಕುವುದೆಂದು ಯಾಬೇಷ್ ಗಿಲ್ಯಾದಿನವರಿಗೆ ತಿಳಿಸಿರಿ>> ಎಂದು ಹೇಳಿ ಅವರನ್ನು ಕಳುಹಿಸಿದರು. 10ದೂತರು ಹೋಗಿ ಈ ವರ್ತಮಾನವನ್ನು ತಿಳಿಸಲು ಯಾಬೇಷಿನವರು ಬಹಳವಾಗಿ ಸಂತೋಷಪಟ್ಟು ಅಮ್ಮೋನಿಯರಿಗೆ, <<ನಾವು ನಾಳೆ ನಿಮ್ಮ ಬಳಿಗೆ ಬರುವೆವು; ನಿಮಗೆ ಸರಿ ಕಾಣುವ ಪ್ರಕಾರ ಮಾಡಿರಿ>> ಎಂದು ಹೇಳಿದರು.

11ಸೌಲನು ಬೆಳಗಿನ ಜಾವದಲ್ಲಿ ತನ್ನ ಜನರನ್ನು ಮೂರು ಗುಂಪನ್ನಾಗಿ ಮಾಡಿ ಅಮ್ಮೋನಿಯರ ಪಾಳೆಯದೊಳಗೆ ನುಗ್ಗಿ ಅವರನ್ನು ಮಧ್ಯಾಹ್ನದ ವರೆಗೆ ಹತ್ಯಮಾಡಿದನು. ಉಳಿದವರನ್ನು ಒಟ್ಟಾಗಿ ಸೇರಿಸಿಕೊಳ್ಳದ ಹಾಗೆ ಚದರಿಸಿಬಿಟ್ಟನು.

12ತರುವಾಯ ಜನರು ಸಮುವೇಲನಿಗೆ, <<ಸೌಲನು ನಮಗೆ ಅರಸನಾಗಬಾರದು ಎಂದು ಹೇಳಿದವರು ಯಾರು?
11:12 ಲೂಕ. 19:27.
ಅವರನ್ನು ನಮಗೆ ಒಪ್ಪಿಸಿರಿ; ನಾವು ಕೊಂದುಹಾಕುತ್ತೇವೆ>> ಎಂದರು.
13ಸೌಲನು ಅವರಿಗೆ, <<ಯೆಹೋವನು ಈ ದಿನ ಇಸ್ರಾಯೇಲ್ಯರಿಗೆ ಜಯವನ್ನು ಉಂಟುಮಾಡಿರುವುದರಿಂದ ಯಾರನ್ನೂ ಕೊಲ್ಲಬಾರದು>> ಎಂದು ಹೇಳಿದನು.

14ಸಮುವೇಲನು ಜನರಿಗೆ, <<ಬನ್ನಿರಿ; ಗಿಲ್ಗಾಲಿಗೆ ಹೋಗಿ ಸೌಲನ ಅರಸುತನವನ್ನು ಸ್ಥಿರಪಡಿಸೋಣ>> ಅನ್ನಲು ಅವರೆಲ್ಲರೂ ಅಲ್ಲಿಗೆ ಹೋಗಿ ಯೆಹೋವನ ಸನ್ನಿಧಿಯಲ್ಲಿ ಸೌಲನ ಅರಸುತನವನ್ನು ಸ್ಥಿರಪಡಿಸಿ, ಯೆಹೋವನಿಗೆ ಸಮಾಧಾನ ಯಜ್ಞಗಳನ್ನು ಸಮರ್ಪಿಸಿ, ಸೌಲನೊಡನೆ ಬಹಳವಾಗಿ ಆನಂದಿಸಿದರು.

15

Copyright information for KanULB